ದೇವಸ್ಥಾನದ ಬ್ರಹ್ಮಕಲಶ ನಡೆದುಬರೋಬ್ಬರಿ ಹನ್ನೊಂದು ವರ್ಷ ಕಳೆದರೂ, ಕ್ಷೇತ್ರದಲ್ಲಿ ದೇವರ ಸಾನಿಧ್ಯ ವೃದ್ಧಿಯಾಗಿಲ್ಲ ಎಂಬುದು ಪ್ರಶ್ನೆ ಚಿಂತನೆಗೆ ಹೋದಲ್ಲೆಲ್ಲಾ ಕಾಣುತ್ತಿದೆ. ಹಾಗಾದರೆ ಇಲ್ಲಿ ದೇವರಿಗೆ ನಿತ್ಯ ಪೂಜೆಯೇ ನಡೆಯುತ್ತಿಲ್ಲವೇ ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ಅದಕ್ಕೆ ಉತ್ತರ ನೀಡಬೇಕಾದವರು ಯಾರೆಂಬ ಪ್ರಶ್ನೆಯನ್ನು ಇಷ್ಟಿಕಾಪುರದ ಒಡೆಯನಲ್ಲೇ ಕೇಳುವ ಪ್ರಮೇಯ ಈಗ ಎದುರಾಗಿದೆ.
ಪಂಚ ಪಾಡವರು ಅಜ್ಞಾತವಾಸದಲ್ಲಿ ಇಷ್ಟಿಕಾಪುರವನ್ನು ಪ್ರವೇಶ ಮಾಡುತ್ತಾರೆ. ಈ ಸಂದರ್ಭದಲ್ಲಿ ಪಾಂಡವರು ಪಂಚಲಿಂಗವನ್ನು ಪ್ರತಿಷ್ಠೆ ಮಾಡಿದರೆಂಬ ಪ್ರತೀತಿ ಇಂದಿಗೂ ಉಳಿದುಕೊಂಡಿದೆ. ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನ ಎಂದು ಐದು ಲಿಂಗಗಳನ್ನು ಇಲ್ಲಿ ಗುರುತಿಸಲಾಯಿತು. ಆದರೆ ಆಗ ಸ್ಥಾಪನೆ ಮಾಡಿದ ಲಿಂಗವನ್ನು ಕಿತ್ತು ತೆಗೆಯುವ ಹಕ್ಕು ಯಾರೊಬ್ಬರಿಗೂ ಇರದಿದ್ದರೂ, ಜೀರ್ಣೊದ್ಧಾರದ ಹೆಸರಿನಲ್ಲಿ ದೇವಾಲಯವನ್ನು ಬುಡ ಸಮೇತ ಕಿತ್ತು ಹೊಸದಾಗಿ ದೇವಸ್ಥಾನ ನಿರ್ಮಾಣ ಮಾಡಲಾಯಿತು.
ಜೀರ್ಣೋದ್ಧಾರಕಾರ್ಯಕ್ಕೆ ಹೊರಟವರಿಗೆ ಎದುರಿಗೆ ಸಿಕ್ಕಿದ್ದು, ಮುಂಡಾಸಿನವರು. ವಿಟ್ಲಕ್ಕೆ ಬರೋದಕ್ಕೆ ಮುಂಡಾಸಿಗೆ ಅನುಮತಿ ಇಲ್ಲದಿದ್ದರೂ, ಕರೆಸಿ ಕೆಸರಿಗೆ ಕಲ್ಲು ಹಾಕಿಸಲಾಯಿತು. ಸುಮಾರು 10 ವರ್ಷಗಳ ಕಠಿಣ ಕಾರ್ಯದ ಬಳಿಕ ಶಿಲಾಮಯ ದೇವಸ್ಥಾನ ಮೂಲ ದೇವಸ್ಥಾನಕ್ಕಿಂತ ವಿಭಿನ್ನವಾಗಿ ಚರಂಡಿ ನೀರು ದೇವಸ್ಥಾನಕ್ಕೆ ನುಗ್ಗದಂತೆ ಎತ್ತರದಲ್ಲಿ ನಿರ್ಮಾಣ ಮಾಡಲಾಯಿತು. ಜೀರ್ಣೋದ್ಧಾರ ಕಾರ್ಯದ ಸಂದರ್ಭದಲ್ಲೇ ಹಲವು ಅವ್ಯವಸ್ಥೆಗಳಾದರೂ ಕೆಲವರಿಗೆ ತಲೆ ಬಾಗಲು ಮನಸ್ಸಿಲ್ಲದ ಕಾರಣ ಅದನ್ನು ಮುಚ್ಚಿಟ್ಟು ಬ್ರಹ್ಮಕಲಶ ಮಾಡಲಾಯಿತು.
ಪ್ರತಿಷ್ಠೆಗೂ ಮೊದಲೇ ಪ್ರತಿಷ್ಟೆ ಮೆರೆದ ಸಮಿತಿ..!!!

ಮುಹೂರ್ತದ ಪ್ರಕಾರ 18-01-2013 ರ ಬೆಳಗ್ಗೆ 9.30ಕ್ಕೆ ಪೀಠ ಪ್ರತಿಷ್ಠೆ, ಶ್ರೀ ಪಂಚಲಿಂಗನ ಪ್ರತಿಷ್ಠೆ ನಡೆದು ಅಷ್ಠಬಂಧ ಕ್ರಿಯೆ ನಡೆಯಬೇಕು. ಅಷ್ಠಬಂಧ ಗಟ್ಟಿಯಾಗುವುದಿಲ್ಲ ಎಂಬ ಕಾರಣಕ್ಕೆ ಪ್ರತಿಷ್ಠೆಗೆ ಮೊದಲೇ ಬಾಲಾಲಯದಲ್ಲಿದ್ದ ಲಿಂಗವನ್ನು ನೂತನ ದೇವಸ್ಥಾನದ ಒಳಗೆ ತೆಗೆದುಕೊಂಡು ಹೋಗಿ ಆಗಿನ ದೇವಾಲಯದ ಅರ್ಚಕರು ಹಾಗೂ ಕೆಲವು ಗಣ್ಯರು ಸೇರಿಕೊಂಡು 23-12-2012 ರಂದೇ ಪೀಠ ಪ್ರತಿಷ್ಠೆ, ಶ್ರೀ ಪಂಚಲಿಂಗನ ಪ್ರತಿಷ್ಠೆ ನಡೆದು ಅಷ್ಟಬಂಧಕ್ರಿಯೆ ನಡೆಸಲಾಗಿತ್ತು..!!

ಶುಕ್ರವಾರ ನಡೆಯಬೇಕಾದ ಕಾರ್ಯ ಪಂಚಲಿಂಗ ಪ್ರತಿಷ್ಠೆ 21 ದಿನಗಳ ಮೊದಲೇ ಒಂದು ಭಾನುವಾರ ನಡೆದು ಹೋಯಿತು. ಲಕ್ಷಾಂತರ ಜನರ ಕಣ್ಣಿಗೆ ಮಣ್ಣೆರಚಿ ಬ್ರಹ್ಮಕಲಶೋತ್ಸವನ್ನು ಸಮಿತಿಗಳು ಭರ್ಜರಿಯಾಗಿ ನಡೆಸಿತು. ದೇವರು ಗಟ್ಟಿಯಾಗಿ ಕುಳಿತರೋ ಎಂದು ನೋಡಬೇಕಾದ ದೃಢ ಕಲಶವನ್ನು ತಂತ್ರಿಗಳು ನಡೆಸಿದರು. ಆದರೆ ಈಗ ಹತ್ತು ವರ್ಷಗಳವರೆಗೆ ದೃಢವಾಗಿದ್ದ ದೇವರು ಅಲುಗಾಡಾಲು ಪ್ರಾರಂಭಿಸಿದ್ದಾರೆಂಬುದು ಈಗ ಜನರ ಚರ್ಚೆಗೆ ಕಾರಣವಾಗಿದೆ.

ಪರಿಹಾರ ಕಾರ್ಯ ನಡೆದರೂ ಏನು ಸಮಸ್ಯೆ??
ದೇವಸ್ಥಾನದಲ್ಲಿ ಸಣ್ಣ ಪುಟ್ಟ ಪ್ರಶ್ನಾಚಿಂತನೆ, ಪರಿಹಾರ ಕಾರ್ಯಗಳು ನಡೆಯುತ್ತಿತ್ತು. ಮಲರಾಯಿ ದೈವದ ಭಂಡಾರಕ್ಕೆ ಸಮಿತಿಯೊಂದರ ವತಿಯಿಂದ ಸಮರ್ಪಿಸಲ್ಪಟ್ಟ ನೂತನ ಪಲ್ಲಕ್ಕಿಯ ಮೆರವಣಿಗೆ 14-10-2022ರಂದು ನಡೆದು, 18-01-2022ರಂದು ಕೇಪುವಿನಿಂದ ಬಂಡಾರ ತರುವ ಸಂದರ್ಭದಲ್ಲಿ ಪಡಿಬಾಗಿಲು ತಲುಪುವಾಗಲೇ ಈ ನೂತನ ಪಲ್ಲಕ್ಕಿಯ ನಟ್ಟು ಬೋಲ್ಟು ಬಿಟ್ಟು ಕದಲಲು ಶುರುವಾಯಿತು. ಅಂತೂ ಇಂತೂ ಹೇಗೋ ಭಂಡಾರವನ್ನು ವಿಟ್ಲಕ್ಕೆ ತಲುಪಿಸಲಾಯಿತು.
ದೇವರ ಜಾತ್ರೆ ಮುಗಿಸಿ ದೇವರು ಕೊಡುಂಗಾಯಿಗೆ ಜಳಕಕ್ಕೆ 22-02-2022 ರಂದು ಹೋಗುವಾಗ ನಡುವಿನಲ್ಲಿ ಒಂದು ಕಟ್ಟೆ ಪೂಜೆಗೆ ತೆರಳುವ ಸಂದರ್ಭದಲ್ಲಿ ಬಳ್ಳಿ ತಾಗಿ ಬ್ರಹ್ಮ ವಾಹಕರ ತಲೆಯಲ್ಲಿದ್ದ ದೇವರು ನೆಲಕ್ಕೆ ಬಿದ್ದರು. ಏನೂ ತಿಳಿಯದಂತೆ ಜಳಕ ಮುಗಿಸಿ, ದೇವಸ್ಥಾನಕ್ಕೆ ಆಗಮಿಸಿ ಸದ್ದಿಲ್ಲದೆ ಪರಿಹಾರ ಕಾರ್ಯಗಳನ್ನು ಗಡಿಬಿಡಿಯಲ್ಲಿ ಮಾಡಲಾಗುತ್ತದೆ. ಕೆಲವರಿಗೆ ಧ್ವಜ ಕೆಳಗೆ ಇಳಿಸುವ ಸಂದರ್ಭದಲ್ಲಿ ಇಷ್ಟೆಲ್ಲಾ ಪ್ರಕ್ರಿಯೆ ಇಲ್ಲದಿದ್ದರೂ ನಡೆಸುತ್ತಿರುವ ಬಗ್ಗೆ ಅನುಮಾನ ಮೂಡಿತ್ತು. ಆದರೆ ಸಂಬಂಧಪಟ್ಟವರು ತಕ್ಷಣ ಕವಡೆ ಪ್ರಶ್ನೆಗೆ ಮುಖ ಮಾಡಿದ್ದು, ನಿರ್ಲಕ್ಷಿಸಿದರೆ ಸರ್ವನಾಶ ನಿಶ್ಚಿತ ಎಂದಾಗ ಬೆವರು ಬಿಚ್ಚಿಸಿಕೊಂಡು ಅಲ್ಲಿಂದ ಮೆಲ್ಲ ಹೊರ ಬಂದಿದ್ದಾರೆ.
ಸಾನಿಧ್ಯ ವೃದ್ಧಿಯ ನೆಪದಲ್ಲಿ ಶತರುದ್ರ…
ಆ ಬಳಿಕ ವರ್ಷದ ಕಾಲ ಸಾನಿಧ್ಯ ವೃದ್ಧಿಯ ನೆಪದಲ್ಲಿ ಶತರುದ್ರವನ್ನು ತಿಂಗಳಲ್ಲಿ ಒಂದು ದಿನದಂತೆ ವರ್ಷ ಪೂರ್ತಿ ನಡೆಸಿದರು. ಶತರುದ್ರ ಮಾಡುವವರಿಗೆ ದೇವರು ತಲೆಯಿಂದ ಜಾರಿದ ವಿಚಾರ ತಿಳಿಯದೆ ದೇವಸ್ಥಾನದ ಮಹಾ ಕಾರ್ಯದಲ್ಲಿ ತಾನೂ ಭಾಗಿಯಾಗಿದ್ದೇನೆಂಬ ಹುಮ್ಮಸಿನಿಂದಿದ್ದ ಕಾರಣ ಕೆಲವರ ಪಾಪ ಕಾರ್ಯಕ್ಕೆ ತಾವೂ ಭಾಗಿಯಾಗುತ್ತಿದ್ದೇವೆಂಬುದು ತಿಳಿಯಲೇ ಇಲ್ಲ. ಮತ್ತೆ 2023ರ ಜಾತ್ರೆ ಪ್ರಾರಂಭವಾಗಿಯೇ ಬಿಟ್ಟಿತು. ದೇವರು ತಮ್ಮ ಸಾನಿಧ್ಯ ವೃದ್ಧಿಯನ್ನು ಮತ್ತೊಮ್ಮೆ ದೇವಸ್ಥಾನದ ಒಳಗೆಯೇ ತೋರಿಸಿದರು. ಬಲಿಯ ಸಂದರ್ಭದ ದೇವರನ್ನು ಹೊತ್ತವರಿಗೆ ತಲೆ ಸುತ್ತು ಬಂದು ವಾಂತಿ ಬರುವಂತಾಗಿ ತಲೆಯಲ್ಲಿದ್ದ ದೇವರನ್ನು ಇನ್ನೊಬ್ಬರ ತಲೆಗೆ ಹಸ್ತಾಂತರ ಮಾಡಿಯೇ ಬಿಟ್ಟರು.
2023ರ ನವಂಬರ್ ತಿಂಗಳಲ್ಲಿ ದೀಪಾವಳಿ ಉತ್ಸವ ಬಲಿ ನಡೆಯುತ್ತಿದ್ದಾಗ ಬ್ರಹ್ಮವಾಹಕರ ತಲೆಯಿಂದ ಪುಷ್ಪಕನ್ನಡಿ ಜಾರಿದರೂ ದೇವರನ್ನು ಕೈಯಲ್ಲಿ ಹಿಡಿದ ಕಾರಣ ಉತ್ಸವ ಮೂರ್ತಿ ಉಳಿದುಕೊಂಡು ಪೀಠ ನೆಲಕ್ಕೆ ಬಿದ್ದು ಒಡಕಾಯಿತು. ಇದು ಕೆಲವರಿಗೆ ಮಾತ್ರ ತಿಳಿದಿದ್ದು, ಇದಾಗುತ್ತಿದ್ದಂತೆ ವಿಟ್ಲ ಸೀಮೆಯ ಪ್ರಖ್ಯಾತ ಜ್ಯೋತಿಷಿಯನ್ನು ಕರೆಸಿ ದೇವಸ್ಥಾನದಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 12ರ ನಡುವೆ ಪ್ರಶ್ನಾಚಿಂತನೆಯನ್ನು ನಡೆಸಿ ಈಗಿನ ತಂತ್ರಿಗಳೇ ಪರಿಹಾರ ನಡೆಸಿದರೆ ಸಾಕು ಮತ್ತು ಜಾತ್ರೆಯ ಬಳಿಕ ಹಿಂದಿನಂತೆ ಸಾನಿಧ್ಯ ವೃದ್ಧಿಗೆ ಮತ್ತೆ ಶತರುದ್ರ ಪ್ರಾರಂಭ ಮಾಡಬೇಕೆಂಬಲ್ಲಿಗೆ ಪ್ರಶ್ನೆಯನ್ನು ಮುಕ್ತಾಯಗೊಳಿಸಲಾಯಿತು.
ಮುಚ್ಚಿಟ್ಟದ್ದು ಲೈವ್ ಮೂಲಕ ಬಹಿರಂಗ !!!

13-01-2024ರಂದು ಜಗಮಗ ಪಟ್ಟೆಯಲ್ಲಿ ಬಂದವರು ಉದ್ದುದ್ದ ಪಟ್ಟಿಕೊಟ್ಟು ಅಂಗಡಿಗಳನ್ನೇ ತರಿಸಿ ಪರಿಹಾರಕ್ಕೆ ತೊಡಗಿದ್ದೇ ತೊಡಗಿದ್ದು, ದೇವರು ದೃಢವಾಗೋದು ನಿಶ್ಚಯ ಎಂದು ಎಲ್ಲರಿಗೂ ಖುಷಿಯೋ ಖುಷಿ. ಆದರೆ ಜಾತ್ರೆ ಪ್ರಾರಂಭವಾಗುತ್ತಿದ್ದಂತೆ ರಾಯರ ತಲೆಯಲ್ಲಿ ದೇವರು ನಿಲ್ಲಲು ಒಪ್ಪದಂತೆ ಜಾರುವುದೇ ಜಾರುವುದು…!

ಇಷ್ಟು ದಿನ ಭಕ್ತರಿಂದ ಪುಚ್ಚಿಟ್ಟ ಸತ್ಯವನ್ನು ಎಲ್ಲರಿಗೂ ತೋರಿಸಿಯೇ ಸಿದ್ದ ಎಂಬಂತೆ ದೇವರು ನಿರ್ಧರಿಸಿರಬೇಕು, ಯಾವುದು ಜನರ ಮುಂದೆ ಬರದಂತೆ ನೋಡಿಕೊಂಡಿದ್ದವರಿಗೆ ದೇವರು ಪಾಠಕಲಿಸಬೇಕೆಂದು ನಿರ್ಧರಿಸಿದ್ದರೋ ಏನೋ? ಕೆರೆ ಆಯನಕ್ಕೆ ಹೋಗುವಾಗ ಖಾಸಗಿ ಚಾನಲ್ ಒಂದರಲ್ಲಿ ಲೈವ್ ಪ್ರಸಾರ ಬರುತ್ತಿದ್ದ ಸಂದರ್ಭದಲ್ಲೇ ದೇವರು ಮುಂಭಾಗಕ್ಕೆ ಹಾರುವುದಾ..!? ಮುಚ್ಚಿಟ್ಟ ವಿಚಾರಗಳೆಲ್ಲವೂ ಒಮ್ಮೆಲೇ ಹೊರಗೆ ಬಂದು ಬಿಡುವುದಾ?
ಮಹಾಲಿಂಗನ ಚಾಕರಿಯಿಂದ ರಾಯರಿಗೆ ಖಾಯಂ ಗೇಟ್ ಪಾಸ್??
ಜಗಮಗ ಪಟ್ಟೆಯಲ್ಲಿ ಪರಿಹಾರ ಮಾಡಿದವರಿಗೆ ತನ್ನ ಶಕ್ತಿಯನ್ನು ಪರೀಕ್ಷೆ ಮಾಡುತ್ತಿದ್ದಾರೆಂದು ಬ್ರಹ್ಮವಾಹಕರಲ್ಲಿ ಸಿಟ್ಟು ಬಂದು ನೀನು ದೇವರು ಹೊತ್ತಿದ್ದು ಸಾಕು ಎಂದೇ ಬಿಟ್ಟರು. ತಿಂಗಳ ಹಿಂದೆಯಷ್ಟೇ ಪುತ್ತೂರು ಮಹಾಲಿಂಗನ ಚಾಕರಿಯಿಂದ ಖಾಯಂ ಆಗಿ ಗೇಟ್ ಪಾಸ್ ಪಡೆದಿದ್ದ ರಾಯರು ಅಸಮಾಧಾನಗೊಂಡು ತಮ್ಮೊಂದಿಗೆ ಬಂದಿದ್ದ ಮತ್ತೊಬ್ಬ ಸಹಾಯಕ ಬ್ರಹ್ಮ ವಾಹಕರನ್ನೂ ಜತೆಗೇ ಕರೆದುಕೊಂಡು ಹೋಗುವ ಎಚ್ಚರಿಕೆ ನೀಡಿದರು. ಇದರಿಂದ ದೇವರನ್ನು ಹೊರಲು ತಕ್ಷಣಕ್ಕೆ ಬೇರೊಬ್ಬ ಬ್ರಹ್ಮ ವಾಹಕರನ್ನು ವ್ಯವಸ್ಥೆ ಮಾಡಲಾಗದೆ ಜಗಮಗ ಪಟ್ಟೆಯವರು ಅಲ್ಲಿಗೆ ಸುಮ್ಮನಾದರು. ದೇವರ ಪೇಟೆ ಸವಾರಿ ಹೋಗುವಾಗಲೂ ಅಪ್ಪೆರಿಪಾದೆಯಲ್ಲಿ ಒಬ್ಬ ಬ್ರಹ್ಮ ವಾಹಕರ ತಲೆಯಿಂದ ಮತ್ತೊಬ್ಬರ ತಲೆಗೆ ಬದಲಿಸಿಕೊಂಡ ದೇವರನ್ನು ಹೇಗೋ ಮತ್ತೆ ದೇವಸ್ಥಾನ ಸೇರಿಸಿದರು.
2022ರಲ್ಲಿ ಆದ ದುರ್ಘಟನೆಯಲ್ಲಿ ಜೋತಿಷ್ಯರು ಹೇಳಿದಂತೆ ವಿಟ್ಲದ ಸರ್ವನಾಶ ಆಗುವುದೋ, ದೇವಸ್ಥಾನಕ್ಕೆ ಸಂಬಂಧಪಟ್ಟವರಿಗೆ ಉಳಿಗಾಲ ಇಲ್ಲದಾಗುವುದೋ, ಪರಿಹಾರದ ಹೆಸರಿನಲ್ಲಿ ಹಣ ಲೂಟುತ್ತಿರುವವರ ಅಂತ್ಯ ಕಾಣುವುದೋ ಎಂಬ ಪ್ರಶ್ನೆ ಜನರಲ್ಲಿ ಮೂಡಲಾರಂಭಿಸಿದೆ. ಆಗಬೇಕಾದ ವ್ಯವಸ್ಥೆಯನ್ನು ಸರಿ ಮಾಡದೇ ಒಣ “ಪ್ರತಿಷ್ಠೆ”ಯನ್ನು ಮುಂದುವರಿಸುವ ಉದ್ದೇಶವೇನೆನ್ನುವುದು ಈಗ ಯಕ್ಷ ಪ್ರಶ್ನೆಯಾಗಿದೆ. ದೇವತಾ ಕಾರ್ಯಗಳು ಸರಿಯಾಗಲಿ ಅನ್ನುವ ಸದುದ್ದೇಶದಿಂದಲೇ ”ಗಿಡಿ”ಯು “ಬೊಂಟೆ”ಯಾಡಿದೆ. ‘ಗಿಡಿ’ಗೆ ಆಹಾರವಾದ ಮೇಲಾದರೂ ದೇವತಾ ಕಾರ್ಯಗಳು ಸರಿಯಾದ ರೀತಿಯಲ್ಲಿ ನಡೆದೀತಾ? ಕಾದು ನೋಡಬೇಕಿದೆ.