
ಲೋಕಸಭೆ ವೋಟ್ ಉಪ್ಪಿಲ್ಲದ ಸಾರಿನಂತೆ ಸಪ್ಪೆಯಾಗಿ ಸಾಗುತ್ತಿದ್ದ ವೇಳೆ ದೇಶಭಕ್ತರ ಎರಡು ತಂಡಗಳ ಮಾರಾಮಾರಿಯಾದ ಘಟನೆ ಪುತ್ತೂರಿನ ಗಡಪಿಲದಲ್ಲಿ ಸೋಮವಾರ ಸೂರ್ಯ ಕಂತುವ ಸಮಯದಲ್ಲಿ ನಡೆದಿದೆ. ಕಳೆದ ವರ್ಷ ನಡೆದ ಎಂ.ಎಲ್.ಎ ಎಲೆಕ್ಷನ್ ವೇಳೆ ದೇಶಭಕ್ತರ ತಂಡ ಪುತ್ತೂರಿನಲ್ಲಿ ಎರಡು ತುಂಡಾದದ್ದು ಎಲ್ಲರಿಗೂ ಗೊತ್ತಿರುವ ವಿಷಯ. ದೇಶಭಕ್ತರ ನಡುವಿನ ಕಾದಾಟ ಹೋರಾಟ ಪೆಟ್ಟು- ಗಲಾಟೆ ಹತ್ತೂರಿಗೂ ಹಬ್ಬಿ ಪಚ್ಚೆ ಶಾಲಿನವರು ಮುಸಿ ಮುಸಿ ನಗುವಂತಾಗಿತ್ತು. ಇಂತಿಪ್ಪ ಗಲಾಟೆಯನ್ನು ರಾಜಿ ಮಾಡಿಸಲು ಯೋಧನೊಬ್ಬ ಗನ್ ಹಿಡಿದು ಬರಬೇಕಾಯಿತು. ಆತ ಬರುತ್ತಲೇ ಬೈರಸ್ ಅಣ್ಣ ರಾಷ್ಟ್ರ ಭಕ್ತರ ತಂಡ ಸೇರಿ ಜೈ ಮೋದಿ ಅಂದ್ರು . ಆದರೆ ಇತ್ತಂಡಗಳ ಮಿಲನ ಎನ್ನುವುದು ಫೋಟೋಗೆ ಫೊಸ್ ಕೊಡುವುದಕ್ಕೆ ಸೀಮಿತ ಆಗಿತ್ತೇ ಹೊರತು ಒಳಗಿನ ಸ್ಥಿತಿ ಕುರಿನ ಕುಂಬುಡದ ಹಾಗೆಯೇ ಇತ್ತು. ಮೇಲಿಂದ ನೋಡುವವರಿಗಷ್ಟೇ ಕುಂಬುಡ ಚಂದ ಕಾಣುತ್ತಿದ್ದು ಒಳಗಡೆ ಸಂಪೂರ್ಣ ಕೊಳೆತು ನಾರಿದ್ದರಿಂದ ಆರ್ಕಂಜಿಗೂ ಹಾಕದೆ ಅದನ್ನು ತೋಡಿಗೆ ಹಾಕಿ ಬೊಳ್ಳಕ್ಕೆ ಬಿಡುವ ಸ್ಥಿತಿ ತಲುಪಿತ್ತು.
ಪುತ್ತೂರಿನ ಕಾಮಗಾರಿ ವೀರರಿಗೆ ಬೈರಸ್ ಅಣ್ಣ ಪಾರ್ಟಿ ಸೇರಿದ್ದು ಬೆಚ್ಚ ನೆಯ್ಯಿಯಾಗಿ ಪರಿಣಮಿಸಿತ್ತು. ಇವ ಬಂದ್ರೆ ತಾವೆಲ್ಲಿ ಕೆಸರಿನಲ್ಲಿ ಮುಳುಗಿ ಹೋಗುತ್ತೇವೋ ಎಂಬ ಭಯ ಕಾಡತೊಡಗಿತ್ತು. ಪುತ್ತೂರಿನ ಪ್ಲವರ್ ಕಛೇರಿಗೆ ಬೈರಾಸ್ ಪರಿವಾರದವರು ಸೇರಲು ಬರುತ್ತಾರೆ ಎಂದಾಗ ಕೋರ್ಟ್ ರೋಡ್ ಪ್ಲೈವುಡ್ ಸಹಿತ ಕೆಲವು ಮುಖಂಡರು ‘ಆಯೆ ಎಂಚ ಬರ್ಪೆ ಪಂದ್ ತೂವೊಡು’ ಅಂತ ಕಛೇರಿಯಲ್ಲಿ ಚಕ್ಕ ಮಕ್ಕ ಹಾಕಿ ಕೂತಿದ್ದರು. ಅಲ್ಲಿ ನಡೆಯುವ ಅಸಂಬದ್ದ ಗಲಾಟೆ ಜಗಜ್ಜಾಹೀರಾಗಬಾರದೆಂದು ಬಾಗಿಲು ಹಾಕಿದ್ರು, ಪಡ್ಡೆ ಹುಡುಗರು ನೋಡುವ ವಿಡಿಯೋದಲ್ಲಿ ಬರುವ ಹಾಗೇ “ಅಯ್ಯೋ, ಅಮ್ಮಾ, ತೋರ್ಸು, ಹೊಡಿತೀನಿ” ಸೌಂಡ್ ಹೊರಕ್ಕೆ ಕೇಳಿಸುತ್ತಲೇ ಇತ್ತು. ಸಂಕಟ ಶಮನ ಮಾಡಲು ಬಂದ ಜಿಲ್ಲಾಧ್ಯಕ್ಷರು ನೀಲಿ ಕಮಲ ಕರ್ಚಿ ಪೆಟ್ಟು ತಿನ್ನದೇ ಕಚೇರಿಯಿಂದ ಹೊರ ಬಂದು ಎಲ್ಲವನ್ನು ತಿಪ್ಪೆ ಸಾರಿಸಿ, ಟಿವಿಯವರ ಮುಂದೆ ಕಂಪು ಸೂಸಿದ್ದರು. ಒಳಗಡೆ ಏನೂ ಆಗೇ ಇಲ್ಲ ಅನ್ನುವ ಪೋಸ್ ಕೊಟ್ಟ ಜಿಲ್ಲಾಧ್ಯಕ್ಷರು ಸೇರು ಇಲ್ಲ ಪಾವು ಇಲ್ಲ ಎಂದು ಡೈಲಾಗ್ ಹೊಡೆದು ಕಾರ್ ಹತ್ತಿ ಮಂಗಳೂರು ಹೋದವರೇ ಬೈರಸ್ ಅಣ್ಣನಿಗೆ ಎಲ್ಲೆ ಕುಡ್ಲ ಬಲೆ ಅಂತ ಕರೆ ಮಾಡಿ ಹೇಳಿ ಸ್ಲೀಪಿಂಗ್ ಪಿಲ್ ತಿಂದು ನಿದ್ದೆಗೆ ಜಾರಿದ್ದರು.
ಮರುದಿನ ರಾಜ್ಯ ಗೆದ್ದ ರಾಜ ಅರಮನೆಗೆ ಹೋಗುವಂತೆ ವೈರಾಸ್ ಅಣ್ಣ ಪಟಾಲಂ ಕಟ್ಟಿಕೊಂಡು ಕುಡ್ಲ ಹೋಗಿ ಕುತ್ತಿಗೆಗೆ ಮತ್ತೊಂದು ಶಾಲು ಹಾಕಿಸಿಕೊಂಡ್ರು. ಅಧ್ಯಕ್ಷರೂ ಅತ್ತ ಸಬ್ ಕುಛ್ ಛಂಗಾಸಿ ಅಂದ್ರು.
ಆದ್ರೆ ಪುತ್ತೂರಿನಲ್ಲಿ ಬೈರಾಸ್ ಅಣ್ಣ ಹಾಗೂ ಅವರ ಟೀಮ್ ಪಾರ್ಟಿಯೊಳಗೆ ಬರೋಕೆ ಬಿಡವುದಿಲ್ಲ ಎಂದು ನಿಘಂಟು ಮಾಡಿದ್ದ ಗ್ಯಾಂಗೊಂದು ಸುತ್ತಾಡುತ್ತಿತ್ತು. ಹಿಂದೆ ತಿರುಗಿದರೆ ನಾಲ್ಕು ಜನ ಸೇರದ ಮುಖಂಡರು ಕಂಡ ಕಂಡವರ ಕಾಲಿಗೆ ಬಿದ್ದು ಆಯನೊಂಜಿ ಮಾತ್ರ ದೆತ್ತೊನೊರ್ಚಿ ಅಂತಾ ದಮ್ಮಯ್ಯ ಹಾಕುತ್ತಿದ್ದರು.
ಚುನಾವಣೆ ಕಳೆದು ಸ್ವಲ್ಪ ದಿನಕ್ಕೆ ಒಂದು ದಿನ ಮಟ ಮಟ ಮಧ್ಯಾಹ್ನ ಈ ಗ್ಯಾಂಗ್ ನ ಒಬ್ಬಾತ ಮುಕ್ರಂಪಾಡಿಯ ಪರಿವಾರ ಕಛೇರಿಗೆ ಥೇಟ್ ವಿಜಯ್ ತಂಬಿ ಸ್ಟೈಲ್ ನಲ್ಲಿ ಬೆನ್ನಿಗೆ ಕತ್ತಿ ಕಟ್ಟಿಕೊಂಡು ಹೋಗಿ ಅವಾಜ್ ಹಾಕಿದ್ದು ಅಲ್ಲಿಂದ ಬಳಿಕ ಪುತ್ತೂರಿನ ಪೊಲೀಸರು ಪುಡಿ ರೌಡಿಗಳನ್ನು ಎತ್ತಾಕಿಕೊಂಡು ಹೋಗಿ ಚಡ್ಡಿಯಲ್ಲಿ ಕೂರಿಸಿದ್ದು ನಿಮಗೆ ಗೊತ್ತೇ ಇದೆ.
ಎಂಪಿ ಎಲೆಕ್ಷನ್ ಕ್ಯಾಂಪೇನ್ ಅಲ್ಲಿ ಸೈನಿಕನ ಎಡ – ಬಲದಲ್ಲಿ ಬೈರಾಸ್ ಟೀಮ್ ಸುತ್ತಾಡುವುದು, ದೇಶಭಕ್ತರ ತಂಡದ ಚಡ್ಡಿ ಗ್ಯಾಂಗ್ ಗೆ ಸುತರಾಂ ಇಷ್ಟವಿರಲಿಲ್ಲ. ಆಗಾಗ ಕಾಲು ಕರೆದು ಬೈರಾಸ್ ತಂಡದ ಜತೆ ಈ ತಂಡ ಪೆಟ್ಟಿಗೆ ನಿಲ್ಲುತ್ತಿತ್ತು. ಪಕ್ಷದ ಹಿರಿಯರು ಆಗ ಈ ಎರಡು ತಂಡದ ಯುವಕರನ್ನು ಕೋಳಿ ಅಂಕದ ಕೋಳಿಗಳಂತೆ ಹೊರಗೆ ತೆಗೆದು ಗಾಳಿ ಹಾಕಿ ಸಮಾಧಾನ ಮಾಡುತ್ತಿದ್ದರು.
ಈ ರೌಡಿ ತಂಡಕ್ಕೆ ಪೊಯ್ಯೆ ಎಂಪಿ ನಾಯಕ. ಪೊಯ್ಯೆ ಎಂಪಿ ಹೇಗಾದರೂ ಮಾಡಿ ಸೈನಿಕನನ್ನು ಚಿವುಟಿ ಹಾಕಲೇಬೇಕೆಂದು ಠೊಂಕ ಕಟ್ಟಿದ ಹಾಗಿದೆ. ಅದಕ್ಕೆ ಆತ ಹಲವು ಪ್ಲ್ಯಾನ್ ಮಾಡುತ್ತಿದ್ದಾನೆ. ಅದರಂತೆ ಪುತ್ತೂರಿನ ತಿಂಗಳಾಡಿಯಲ್ಲಿ ಕೆಸರ ಹೂವಿನ ಪಕ್ಷದ ಮಹಾ ಅಭಿಯಾನದಲ್ಲಿ ಬೈರಾಸ್ ಪರಿವಾರ ಸೇರಬಾರದು ಎಂದು ಮೂಲ ರಾಷ್ಟಭಕ್ತರು ಆಕ್ಷೇಪ ವ್ಯಕ್ತಪಡಿಸಿ ಗಲಾಟೆಗೆ ಮುಂದಾಗಿದ್ದರು. ಕೊನೆಗೆ ಪರಿವಾರದವರು ತಮ್ಮ ಬಿಡಾರ ಬೇರೆ ಎಂದು ಹೇಳಿಕೊಂಡು ಹೋಗುವ ಕಾರ್ಯ ಐತಾರ ನಡೆಯಿತು.
ಇಂದೆನ್ ಸರಿ ಮಾನ್ಪೋಡು ಅಂತ ಆಜ್ಞೆಯಾದ ಹಿನ್ನಲೆಯಲ್ಲಿ ಸೋಮವಾರ ಅಕ್ಕ, ಅಣ್ಣ, ತಮ್ಮ ಎಲ್ಲಾ ಪ್ರಚಾರಕ್ಕೆ ಹೋಗಬೇಕು ಅಂತಾ ಮೇಲಿನಿಂದ ಆಜ್ಞೆಯಾಗಿದೆ. ಅಷ್ಟರಲ್ಲಿ ಒಂದು ಎಡವಟ್ಟು ಆಗಿದೆ. ರೌಡಿ ಗ್ಯಾಂಗಿನ ಶಕುನಿ ಪೊಸಇಲ್ ಎಂಬಾತ ಬರೆದಿದ್ದ ಪೋಸ್ಟ್ ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರ ಹಿಂದೆ ಬೈರಾಸ್ ತಂಡ ಇದೆ ಎಂಬ ಗುಮಾನಿ ರೌಡಿ ಗ್ಯಾಂಗಿಗೆ. ಹೀಗಾಗಿ ಬೈರಸ್ ಗ್ಯಾಂಗಿನ ತಂಡದವರು ದೇಶಭಕ್ತರ ಜತೆ ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾಗ ರೌಡಿ ಗ್ಯಾಂಗ್ ಅಲ್ಲಿಗೆ ಎಂಟ್ರಿ ಕೊಟ್ಟಿದೆ.
ಆಗ ಆಗಿದ್ದೇ ರೋಚಕ ರಣ ಕೌತಕ ಸಂಗತಿ.. ಮೊದಲು ಪರ್ಪುಂಜದಲ್ಲಿ ಎರಡು ತಂಡದವರು ಮಲೆಪ್ಪಿದ್ದಾರೆ. ಬಳಿಕ ಅವರ ಸವಾರಿ ಸೂರ್ಯ ಕಂತುವ ಸಮಯಕ್ಕೆ ಸರ್ವೆ ಬಳಿಯ ಗಡಿಪಿಲಕ್ಕೆ ಬಂದಿದೆ. ಅಲ್ಲಿ ರೌಡಿ ಪಡೆ ಹಾಗೂ ಬೈರಾಸ್ ತಂಡದ ನಡುವೆ ಉರುಡಾಪಟ್ಟೆ ಆಗಿದೆ. ಅಂದು ಬೆನ್ನಿಗೆ ತಲ್ವಾರು ಕಟ್ಟಿಕೊಂಡು ಹೋದವ ಈ ಬಾರಿ ಕಿಸೆಯಿಂದ ಚೂರಿ ತೆಗೆದು ಬೆದರಿಸಿದ್ದಾನೆ. ಆಗ ಅವನಿಗೆ ಮರದ ಸೊಂಟೆಯಲ್ಲಿ ಒಂದು ಬಿದ್ದಿದೆ. ಮುಸುಂಟು ಬಾಪಿದೆ. ಅವನ ನೆರವಿಗೆ ಬಂದ ಪೊಸಇಲ್ ಗೆ ತಿಂಗಳಾಡಿ ಡಾನ್ ಪಟ ಪಟ ಅಂತಾ ಬಿಗಿದಿದ್ದಾನೆ. ಅಂದು ಸಂಪ್ಯದಲ್ಲಿ ಪೊಲೀಸ್ ಲಾಠಿ ಏಟು ತಿಂದ ಬಳಿಕ ಮತ್ತೊಮ್ಮೆ ಸರಿಯಾಗಿ ಬೆಂಡ್ ತೆಗೆಯಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಈ ಜಗಳ ಬಿಡಿಸಲು ಬಂದ ಬಾಲ್ನಾಡಿನ ಮಾಜಿ ಕಡಲ್ ಬರಿ ಪ್ರಾಧಿಕಾರಕ್ಕೂ ಎರಡೇಟು ಸಿಕ್ಕಿದೆ. ಪಾಪ ವಯಸ್ಸಿಗೆ ಗೌರವ ಸಿಕ್ಕೀತು ಅಂದುಕೊಂಡವರು ಕಜ್ಜಾಯ ತಿಂದ ಬಿಸಿಯಲ್ಲಿ ಕುಣಿಯ ಬಾಯಿಗೆ ಹಾಕಿಕೊಂಡು ಸೈಡ್ ನಿಂತಿದ್ದಾರೆ. ರೌಡಿಗಳ ಕಾರಿನಲ್ಲಿ ತಲ್ವಾರ್ ಟನ್ ಟನ್ ಸೌಂಡ್ ಮಾಡುತಿತ್ತು. ಇದನ್ನು ಕೇಳಿದ ಅಕ್ಕ ಆ”ಲೋಚನೆ” ಮಾಡದೆ ಕಾರ್ ಹತ್ತಿ ಅಡಗಿ ಕುಳಿತವರು ಪುತ್ತೂರಿಗೆ ಬಂದ ಬಳಿಕವೇ ಗಾಡಿಯಿಂದ ಹೊರಗೆ ಬಂದದ್ದು.
ಮಂಗಳವಾರ ಮಾಜಿ ಚಿಂಗಂ ಎಸ್ಪಿ ತಮಿಳುನಾಡಿನಿಂದ ಪುತ್ತೂರಿಗೆ ಬರೋದು ನಿಗಂಟು ಆಗಿದೆ. ರೋಡ್ ಶೋನಲ್ಲಿ ಚಿಂಗಂ ಎಸ್ಪಿ ಜತೆ ಬೈರಾಸ್ ಅಣ್ಣ ಒಂದೇ ಗಾಡಿಯಲ್ಲಿ ಕೈ ಮುಗಿದು ಹೋಗುವುದು ಅಂತ ಪ್ಲಾನ್ ಇತ್ತು. ಆದ್ರೆ ಮಂಗಳವಾರ ಬೈರಾಸ್ ಗಾಡಿ ಹತ್ತಿದ್ರೆ ನಾವು ಒಂದು ಕೈ ನೋಡಿಕೊಳ್ಳುತ್ತೇವೆ ಎಂದು ಎಂದು ರೌಡಿ ಪಡೆ ಅವಾಜ್ ಹಾಕಿ ಹೋಗಿದೆ.
ಅಂಗಾರೆ ನೆಡೆಯುವ ರೋಡ್ ಶೋ ಪಕ್ಷದ ಕಚ್ಚಾಟದ ಶೋ ಆಗುತ್ತಾ ಎಂಬ ಭಯದಲ್ಲಿ ಕಾರ್ಯಕರ್ತರನ್ನು ಸೇರಿಸಬೇಕಾ ಬೇಡವಾ ಎನ್ನುವ ಗೊಂದಲದಲ್ಲಿ ಪಕ್ಷ ಸಂಘ ತೀವ್ರ ಚರ್ಚೆಯನ್ನು ನಡೆಸುತ್ತಿದೆ. ಹಿರಿಯರ ಆದೇಶ ಬಂದ ಮೇಲೆ ತಡರಾತ್ರಿ ಎಲ್ಲಾ ವಿಚಾರಕ್ಕೆ ಪೂರ್ಣವಿರಾಮ ಹಾಕುವ ಸಾಧ್ಯತೆ ಇದೆ.
ಮೊದಲೆಲ್ಲ ಗಾಳಿ ಹಾಕಿ ಉಳಿದವರನ್ನು ಗುಂಡಿಗೆ ಹಾಕುತ್ತಿದ್ದ ಪೊಸಇಲ್ ಕಳೆದವರ್ಷ ಪುತ್ತೂರು ದೇವರಿಗೆ ಪರಕೆ ಹೇಳಿ ಈ ವರ್ಷ ರಸ್ತೆ ಮೇಲೆ ನಿಂತು ಪೆಟ್ಟು ಮಾಡುವ ಹಂತಕ್ಕೆ ಬಂದಿದೆ ಅಂತ ಜನ ಆಡಿಕೊಳ್ಳುತ್ತಿದ್ದಾರೆ.